ಕೆರೆಯ ದ೦ಡೆಯಲಿ ಹಸಿರ ಜೊ೦ಡಿನಲಿ
ಕುಸುಮಬಾಲೆಯೇ ನಿನ್ನ ಚೆಲುವಿಕೆ ಅನನ್ಯ
ನೇರಳೆಯ ಬಣ್ಣದಲಿ ಕಾಡುತಿದೆ ಹೊಳಪು
ನವಧುವಿನ೦ತಿಹುದು ನಿನ್ನ ಒನಪು
ಸ್ವಚ್ಛ೦ದ ಪರಿಸರದಿ ಚೆಲುವು ಅರಳುವುದು
ಸ್ನಿಗ್ಧ ಸೌಂದರ್ಯಕೆ ಮನವು ಕೆರಳುವುದು
ನಿನ್ನ೦ದಕಿಲ್ಲಿ ಸಾಟಿ ಯಾವುದೋ ಕಾಣೆ
ಮನಮೊಹಕವು ನಿನ್ನ ಅ೦ದಣದ ಬಣ್ಣ
ಅರಳಿ ಬಾಡುವ ಮುನ್ನ ನಿನ್ನೊಡಲ ಗ೦ಧವನು
ದು೦ಬಿ ಜೇನ್ನೊಣಗಳಿಗೆ ಧಾರೆ ಎರೆವೆ
ದು೦ಬಿಗಳು ಮುತ್ತಿಕ್ಕೆ ನಿನ್ನ ಬದುಕದು ಸಾರ್ಥ
ನಿನಗಿಲ್ಲ ಬೇರಾವ ಇಹದ ಸ್ವಾರ್ಥ
ಅಂದದ ಚಿತ್ರಕ್ಕೆ ಮೇಲಿನ ಕವನವನ್ನ ಬರೆದು ಕೊಟ್ಟವರು ಪರಾಂಜಪೆ ಸರ್ ರವರು. ಅಣ್ಣ ದಿಗ್ವಾಸ್ ಹೆಗ್ಡೆ ಹೂವಿನ ಚಿತ್ರವನ್ನ ಬ್ಲಾಗಿನಲ್ಲಿ ಬಜ್ ಮತ್ತು ಪೇಸ್ ಬುಕ್ ನಲ್ಲಿ ಹಾಕಿ ಇದರ ಹೆಸರನ್ನ ತಿಳಿಸಿ ಅಂತ ಕೇಳಿದ್ರು. ಈ ಅನಾಮಿಕ ಹೂವಿಗೆ ನೂತನವಾದ ಹೆಸರನ್ನ ಬಹಳ ತಮಾಷೆಯಾಗಿ ಸೂಚಿಸಿ ಅದಕ್ಕೆ ಒಂದು ಕವನವನ್ನ ರಚಿಸಿ ಕೊಟ್ಟ ಪರಾಂಜಪೆ ಸರ್ ರವರಿಗೆ ಅನಂತ ಕೋಟಿ ನಮನಗಳು.
ಇನ್ನೂ ಇದರ ಹೆಸರಿನ ಬಗ್ಗೆ ನಮ್ಮಲ್ಲಿ ಚರ್ಚಾಗೋಷ್ಠಿ ನಡೆಯುತ್ತಲೇ ಇದೆ. ತಮಗೆ ಗೊತ್ತಿದ್ದರೆ ಅದರ ಮೂಲ ಕನ್ನಡ ಹೆಸರನ್ನ ಸೂಚಿಸಬಹುದು,ಅಥವಾ ನಿಮ್ಮದೇ ಆದ ಸ್ವಂತಯಾವುದಾದರೂ ಹೆಸರನ್ನ ತಿಳಿಸಬಹುದು.
ಧರಣಿಯೊಳು ಚೆಲುವೆಂಬ ಹೆಸರ ಪಡೆದೆ
ಅದೆಷ್ಟು ಚಂದವೆ ಹೂವೆ ನೀಲವರ್ಣದಿ ನೀನು
ಸೆಳೆಯುವೆಯ ಕಂಗಳನು ಮೋಡಿ ಮಾಡಿ
ಕೆಸರಕೆರೆಯಲಿ ಹುಟ್ಟಿ ಚೊಕ್ಕವಾಗಿಯೆ ಬೆಳೆದೆ
ಧರಣಿಯೊಳು ಚೆಲುವೆಂಬ ಹೆಸರ ಪಡೆದೆ
ಪದ್ಮನಿನ್ನಯ ಚಲುವ ವರ್ಣಿಸಲು ಪದವಿಲ್ಲ
ಪಂಕಜವೆ ನಿನ್ನ ಚಲುವಿಗೆ ಸಾಟಿಯಿಲ್ಲ
ಹೂವೆನಿನ್ನಯ ನಗುವಕಡಲಲಿ ಬಿದ್ದೆ
ತೇಲಿ ಹೋದೆನು ನಾನು ಇನ್ನು ಸಿಗದಂತೆ
ಹೂ ಎನಗೆ ತಿಳಿಸುವೆಯ ನಿನ್ನ ಸೆಳೆವ ಮೋಹಕ ಗಟ್ಟು
ರಮಣಿಯದುರಲಿ ನಾ ಹೂವಾಗಿ ನಿಲ್ಲುವೆನು ಸ್ವಲ್ಪ ಹೂತ್ತು
ಪಂಕಜದ ಹಸನವನು ಎನ್ನ ಮುಖದಲಿ ನೆಟ್ಟು
ಮೋಹಿಪೆನು ನನ್ನವಳ ನಿನ್ನಂತೆ ಬಿಂಕ ಬಿಟ್ಟು
ಮೆಲ್ಲ ಮೆಲ್ಲನೆ ಗಾಳಿ ತೂರಲು ಮೇಲ ಮೇಲಕೆ ಹಾರುವೆ
ಮೆಲ್ಲ ಮೆಲ್ಲನೆ ಗಾಳಿ ತೂರಲು ಮೇಲ ಮೇಲಕೆ ಹಾರುವೆ
ಗಿರಕಿ ಹೊಡೆದು ಬಾನ ಪಥದಲಿ ಸುತ್ತು ಸುತ್ತುತ ತೇಲುವೆ
ಹಕ್ಕಿ ಪುಕ್ಕವೆ ಸೊಕ್ಕು ಎಷ್ಟಿದೆ ಹಿಡಿಯ ಹೋದರೆ ಜಾರುವೆ
ಭಾರವಿಲ್ಲವೂ ಹಗುರ ಹತ್ತಿಯು ಗಾಳಿ ಬಂದೆಡೆ ತೂರುವೆ
ಮನುಜಗಿಲ್ಲಿ ಸಂದೇಶವೂಂದಿದೆ ನೋಡಿ ಅಂದದ ಚಿತ್ರದಿ
ಗಾಳಿಬಂದೆಡೆ ತೂರಿಕೊಂಬುದು ಸೃಷ್ಟಿನಿಯಮವು ಜಗದಲಿ
ಹಗುರಮನವು ನಮ್ಮ ಬಳಿಯಿರೆ ತೇಲಬಹುದು ಚಂದದಿ
ಭಾರಹೄದಯವು ಕೆಲಸ ಮಾಡದು ತೇಲಲಾಗದು ಬಯಲಲಿ
ಹನಿ ಹನಿ ಹನಿಯಾಗಿ ಸನಿಹವು ನೀನಾಗಿ
ಹಸಿರು ಪರ್ಣದಮೇಲೆ ಜಾರುತಿರುವದು ಹನಿಯು
ಹನಿ ತಾ ಸನಿಹವನು ತೊರೆದು ಹೋಗುತಲಿಹುದು
ನಯವಾಗಿ ಎದೆಯಲಿ ಸೇರಿ ನೂರು ಕಲ್ಪನೆ ನೆಟ್ಟು
ಬಿಟ್ಟು ಹೋಗುವೆಯಲ್ಲ ಮನದಂಗಳದಲ್ಲಿ ನೆನಪನಿಟ್ಟು
ಹನಿ ಹನಿ ಹನಿಯಾಗಿ ಸನಿಹವು ನೀನಾಗಿ
ಹೊಳೆ ಹೊಳೆ ದು ಸ್ಪಟಿಕದಂತೆಯೆ ಆಗಿ
ಸೆಳೆ ಸೆಳೆದು ವಿರಹವನು ತಂದಿಟ್ಟು ಜಾರುವೆಯೇಕೆ
ಸರ ಸರನೆ ಜಾರುವಾ ನಿನಗೆ ಗೊತ್ತಿಲ್ಲವೇ ನನ್ನ ಬಯಕೆ
ಹನಿಯಿದ್ದರೇನೆ ಅದು ಹಸಿರಿಗೆ ಸಂಪು
ನಿನ್ನ ಸನಿಹವು ನನಗೆ ನೀಡುವದು ತಂಪು
ನೀನಿಲ್ಲದಾ ಬಾಳು ಹನಿಯಿಲ್ಲದಾ ಹಸಿರು
ನಿನ್ನನೆನಪಲೆ ಸಾಗುತಿದಿದೆ ನನ್ನ ಉಸಿರು
ಬಾನಾಡಿ ಬಾನಿನಲಿ ಭಾನುವಿನ ಮುಂದೆ
ಬಾನಾಡಿ ಬಾನಿನಲಿ ಭಾನುವಿನ ಮುಂದೆ
ಹಾರುತಿದೆ ನೋಡಲ್ಲಿ ಮುಂದೆ ಮುಂದೆ
ಗೂಡುಸೇರುವ ತವಕ ಮುಸ್ಸಂಜೆಯ ಪುಳಕ
ಹಾರಬೇಕಾಗಿದೆ ನಿಲುಗಡೆ ಸಿಗುವ ತನಕ
ಧಿವಾಕರನು ನಯವಾಗಿ ಕೆಂಪು ಗೋಲಕವಾಗಿ
ಸಂಧ್ಯಾ ಸಮಯದಿ ಶರಧಿಯೊಳು ಮುಳುಗತ್ತಲಿರಲು
ಭಾನುವೆದುರಲಿ ವಿಹಗ ಹಾರುತಿರುವದ ನೋಡಿ
ಮೂಡಿದವು ದೃಶ್ಯಗಳು ಚಿತ್ರಪಟದಲಿ ಸುಚಿತ್ರವಾಗಿ
ನೀಲ ಸಮಯ ನೀರಿನಲ್ಲಿ ಅಲೆಯು ಎದ್ದಿದೆ
ನೀಲ ಸಮಯ ನೀರಿನಲ್ಲಿ ಅಲೆಯು ಎದ್ದಿದೆ
ಅಲೆಯು ಎದ್ದು ನೀರಿನಲ್ಲಿ ತರಂಗವಾಗಿದೆ
ಅಂತರಂಗ ಮಸುಕಿನಲ್ಲಿ ಪ್ರಶಾಂತವಾಗಿದೆ
ಅಲೆಯು ಮೆಲ್ಲ ಮೆಲ್ಲ ಕೊಳದಿ ಜಲತರಂಗವಾಗಿದೆ
ಸುತ್ತಿ ಸುತ್ತಿ ದೂರಸರಿವ ಅಲೆಯು ಕೊಳದಲಿ
ಮತ್ತೆ ಮತ್ತೆ ಏರಿಬರುವ ನೆನಪು ಮನದಲಿ
ಪ್ರಶಾಂತದಲ್ಲಿ ಎದ್ದ ಅಲೆಯು ಸುರುಳಿಯಾಗುತ
ಮನಸಿನಲ್ಲಿ ಬರುವ ಚಿತ್ರ ರೂಪತಾಳುತ
ಜೀವನದ ನೆನಪುಗಳಿಗೆ ಅಲೆಯೇ ಮಾದರಿ
ಉಕ್ಕಿ ಬರುವ ಭಾವಲಹರಿ ತೆರೆಯ ತರದಲಿ
ಎದ್ದ ಅಲೆಯು ನೀರಿನಲ್ಲಿ ಲೀನವಾಗಲು
ಬಿಚ್ಚಿಕೊಂಡ ನೆನಪು ಒಮ್ಮೆ ದೂರಸರಿವುದು
ಜೀವಾತ್ಮನಲ್ಲೇ ಅಡಗಿ ಕುಳಿತಿಹನು ಪರಮಾತ್ಮ
ಅಕ್ಕಾ ರೇಶಿಮೆಯ ಸೀರೆಯುಟ್ಟು
ಬೆಳ್ಳಿ ಬಟ್ಟಲಲಿ ತಾಂಬೂಲವಿಟ್ಟು
ತಿನ್ನದಾ ದೇವರಿಗೆ ನೈವೇದ್ಯಕ್ಕಿಡುವದ ಬದಿಗಿಟ್ಟು
ಒಮ್ಮೆ ಹೊಟ್ಟೆಗಿಲ್ಲದವರಿಗೆ ನೋಡು ಎಡೆಇಟ್ಟು
ಜಗದ ಕರುಣಾಕರ ಮನುಜರನು ಭುವಿಗೆ ಇಳಿಬಿಟ್ಟ
ಜಗದ ಜನರಿಗೆ ಹಸಿವಿಟ್ಟ ಆಹಾರವನೂ ಇಟ್ಟ
ಆದರೆ ಇದ್ದವರಿಗೆ ಹಂಚಿತಿಂಬ ಬುದ್ಧಿಯ ಸ್ವಲ್ಪ ಕಡಿಮೆ ಕೊಟ್ಟ
ಆದರೂ ಅಲ್ಲಲ್ಲಿ ಕೆಲವೊಂದಿಷ್ಟು ಉಧಾರಿಗಳನಿಟ್ಟ
ಭಜಿಪ ಮನುಜಗೆ ಹಲವು ದೇವರು,
ನೂರಾರು ಮತ ಅದರೊಳಗೂ ಒಳಪಂತ
ಆದರೆ ಹಸಿವು ಎಲ್ಲರಿಗೂ ಒಂದೆ
ಜೀವಾತ್ಮನಲ್ಲೇ ಅಡಗಿ ಕುಳಿತಿಹನು ಪರಮಾತ್ಮ
ಮಾತಿಗೆ ವ್ಯಾಕರಣ ಪಾಪ ತೊಳೆಯುವದಕೆ ಗೋಕರ್ಣ
ದಿನಕೊಂದು ವೃತ, ಜಪಿಸುವದಕೆ ಮಂತ್ರ,
ಕೈಮುಗಿಯುವದಕೆ ದೇಗುಲ,ಮದರಸಾ ಚರ್ಚುಗಳು,
ಮಂದಿರ,ಇದೆಲ್ಲವೂ ಹೊಟ್ಟೆತುಂಬಿದವಗೆ ಕಾಣಣ್ಣ
ಹಸಿವಾದವಗೆ ಅನ್ನ ಮತ್ತೆಲ್ಲವೂ ಗೌಣ
ಹುಟ್ಟಿಸಿದ ಶಿವ ಹುಲ್ಲು ಮೇಯಿಸಲಾರ ಹೇಳುವದಕೆ ಚಂದ
ಹೊಟ್ಟೆಗೆ ಹಿಟ್ಟಿಲ್ಲದೆ ಜಗದಲಿ ಸತ್ತವರು ಲೆಕ್ಕದಲಿ ಇಲ್ಲ
ಕಡುಬಡವರಿಗೆ ಒಂದಿಷ್ಟು ಉಣುವುದಕೆ ಕೊಡಿ
ಇಲ್ಲಿ ಕೂಡಿಟ್ಟು ತೆಗೆದುಕೊಂಡು ಹೋದವರ್ಯಾರಿಲ್ಲ ಬಿಡಿ